Showing posts with label ಕವನ. Show all posts
Showing posts with label ಕವನ. Show all posts

Tuesday, October 12, 2010

ಬದುಕು ಪಾತರಗಿತ್ತಿ...

ಕಂಡೂ ಕಾಣದಂತೆ, ಎಲೆಯಡಿಯಲ್ಲಿ ಅವಿತ ಮುತ್ತಿನ ಮೊಟ್ಟೆಗಳು
ಅದೆಷ್ಟು ಶತ್ರುಗಳಿಗೆ ತುತ್ತಾಗಿ ಸಾಯುವವೋ, ಮುಗ್ಧ ಕನಸುಗಳು
ಅದೃಷ್ಟವೇ ಇಲ್ಲಿ ಸೂತ್ರಧಾರ, ಜೀವವಿದ್ದರೆ ತಾನೆ, ನಿನ್ನೆ-ನಾಳೆಗಳು

ಕಂಬಳಿ ಹುಳವಾಗಿ, ಯಾರಿಗು ಬೇಡವಾಗಿ, ತನ್ನ ಪಾಡಿಗೆ ತಾನ್ ಕರ್ಮಯೋಗಿಯಂತೆ
ತಿನ್ನುವುದೆ ಬದುಕಾಗಿ, ಸಿಕ್ಕಿದ್ದೆಲ್ಲವ ತಿಂದು, ಅರಗಿಸುವ ಅಧಿಕಾರಿಯಂತೆ
ಮನ ಬರಿದಾಗಿ, ಮೈ ಜಡವಾಗಿ, ಆಧ್ಯಾತ್ಮದೊಲಿವು ತಾನಾಗಿ ಬಂದಂತೆ

ಮೌನವೇ ಸರಿಯೆಂದು, ಬೇರೆಲ್ಲ ಬೇಡೆಂದು, ತನ್ನ ಕೋಟೆಯೊಳಗೆ ತಾನೆ ಬಂಧಿ
ದೀರ್ಘನಿದ್ರೆಯೋ ಅಥವಾ ಆತ್ಮಾವಲೋಕನವೋ, ಎಂಥ ವಿಶ್ರಾಂತಿ
ಪರಿವೆಯೇ ಇಲ್ಲ, ಜಗವೆಲ್ಲ ಕೂಗಿದರೂ, ಅಧ್ಬುತವೀ ಪ್ರಶಾಂತಿ

ತಪಸು ಸಾರ್ಥಕವಾಗಿ, ಮುಕ್ತಿ ಆಹ್ವಾನಿಸಿದೆ,
ಪರಿವರ್ತಿತ ಕಾಯ, ಹೊರಹೊಮ್ಮಿ ಹಾರಾಡಿ,
ಜೀವನಚಕ್ರದಲ್ಲಿ ಮತ್ತೆ ಸಿಲುಕಿ,
ಶೂನ್ಯದಲೇ ಲೀನವಾಗುವ, ಈ ಬದುಕು ಪಾತರಗಿತ್ತಿ...

Thursday, August 12, 2010

ದುಃಖ

ಈ ನೀರವ ಕಾರಿರುಳಲ್ಲಿ,
ಬೀಸುವ ತಂಗಾಳಿಯೊಡನೆ,
ಒಬ್ಬಂಟಿಯಾಗಿ, ಕಣ್ಣೀರು ಸುರಿಸಬೇಕು!

ಕಪ್ಪನೆಯ ಆಗಸದಲ್ಲಿ,
ಮಿನುಗುವ ತಾರೆಯೊಡನೆ,
ಒಮ್ಮೊಮ್ಮೆ, ಮನದಲ್ಲೇ ಬಿಕ್ಕಬೇಕು!

ಕಣ್ತುಂಬುವ ಕನಸೊಳಗೆ,
ಮೇಲ್ನೋಟದ ಖುಷಿಯೊಡನೆ,
ಸೇರಿರುವ ದುಃಖ ಹೊರಹಾಕಬೇಕು!

ಕಣ್ತುಂಬಿ ಬರುವಾಗ,
ಮನವೆಲ್ಲಾ ಬರಿದಾಗಿ,
ಜಗವನ್ನು, ಒಂದು ಕ್ಷಣ ಮರೆಯಬೇಕು!

Friday, January 15, 2010

ಗ್ರಹಣ

ಗ್ರಹಣ ಹಿಡಿದಿರುವುದು, ಸೂರ್ಯನಿಗಲ್ಲ,
ಸೋಮಾರಿ, ಅಜ್ಞಾನಿ, ಮಂದಮತಿಗಳಿಗೆ
ಸೂರ್ಯನೋ ನಿತ್ಯಶುದ್ಧ, ಕತ್ತಲೆ ಅವನಿಗಲ್ಲ,
ಸುತ್ತಲಿನ ಕತ್ತಲೆ ನೀಗಲಾರದ ಮನಗಳಿಗೆ

ದಿನದಿನವು ಉರಿದುರಿದು ಬೆಳಕ ನೀಡುವ
ಆ ದಿವ್ಯದೈತ್ಯನಿಗೆಲ್ಲಿ, ಛಾಯೆಯ ಭಯವು?
ನಮ್ಮೆದೆಯ ಅಳುಕನ್ನು, ಅವನಿಗಾರೋಪಿಸಿ
ಕಳ್ಳ ಜ್ಯೋತಿಷಿಗೆ ಕೈಮುಗಿವೆವು

ಕೆಲಕಾಲ ಕಂದಿದರೂ, ಅವನ ಕಾಂತಿ,
ಮತ್ತೆ ಪ್ರಖರಗೊಳ್ಳುವನು, ಸಂಶಯವಿಲ್ಲ
ನಮ್ಮ ಪ್ರಜ್ಞೆಗೆ ಹಿಡಿವ ಭ್ರಾಂತಿಗೆ ಶಸ್ತ್ರವೇ ಇಲ್ಲ
ಸೂರ್ಯ ಬೆಳಗಿದರೂ, ಅದಕೆ ಮುಕ್ತಿಯಿಲ್ಲ

Thursday, November 26, 2009

ಹೇಮಂತದಲ್ಲೊಂದು ಸಂಜೆ

ಹೇಮಂತದಲ್ಲೊಂದು ಸಂಜೆ, ಖುಷಿಯಾಗಿದೆ ಯಾಕೋ ಮನಸು
ಬಿನ್ನಾಣವಿಲ್ಲದ ಚಳಿಗೆ, ಹಿತವಾಗಿರೋ ಒಂದು ಕನಸು

ಪಶ್ಚಿಮದಂಚಿನಲಿ ಸೂರ್ಯ, ಕೆಂಪಾಗಿರುವಂಥ ಗಗನ
ಹಾರಾಡಿ ಸೋತ ಹಕ್ಕಿ, ಚಿಲಿಪಿಲಿಯಲ್ಲೂ ಕವನ

ಕಪ್ಪಿಡುತಿರುವ ಬಾನು, ಪ್ರತಿಬಿಂಬದಂತೆ ಭಾವ
ಬೆಳಕಿನ ಜಗಕೀಗ ನಿದ್ರೆ, ಕತ್ತಲ ಲೋಕಕ್ಕೆ ಜೀವ

ನೆಟ್ಟಿರುವ ಗೆಳೆಯನ ದೃಷ್ಟಿ, ಹತ್ತಿರವಿದ್ದರೂ ಮೌನ
ಗರಿಗೆದರುತಿರುವ ಪ್ರೇಮ, ಪ್ರೀತಿ ತುಂಬಿರುವ ನಯನ

ನನಗಾಗಿ ಅರಳುತಿದೆ ಎಲ್ಲೋ, ಕಂಪಿನ ರಾತ್ರಿಯ ಹೂವು
ಗೆಳೆಯನ ಎದೆಯಲ್ಲಿ ಒರಗೆ, ಮರೆಯಾಗಿದೆ ಎಲ್ಲಾ ನೋವು

Friday, November 20, 2009

ಒಂಟಿ ಪೆಲಿಕನ್


ಒಂದು ಸುಂದರ ಸಂಜೆಯ ಹಿನ್ನೆಲೆಯಲ್ಲಿ, ನಾನು ನೋಡಿದ ಒಂಟಿ ಪೆಲಿಕನ್ ನನ್ನ ಮನಸ್ಸು ತಟ್ಟಿತು. ಆ ಪೆಲಿಕನ್ ನಿಜವಾಗಲೂ ಒಂಟಿಯಾಗಿತ್ತೋ ಅಥವಾ ಊರಿಗಿಂತ ಮುಂಚೆ ವಲಸೆ ಬಂದ Team lead ಆಗಿತ್ತೋ, ನನಗೆ ಗೊತ್ತಿಲ್ಲ. ಅದರ ಬಗ್ಗೆ ಒಂದು ಕವನ, ನನ್ನ ಕಲ್ಪನೆಯಲ್ಲಿ...


ನೀಲಿಯ ಬಾನಿದೆ, ನಿರ್ಮಲ ನೀರಿದೆ
ಸಂಜೆಯ ತಂಗಾಳಿ ಬೀಸುತಿದೆ
ಇಳಿಯುವ ಸೂರ್ಯನ ಕಾಂತಿಯ ಕೆಂಪಿದೆ
ನೀರಲಿ ಹೊನ್ನಿನ ಛಾಯೆಯಿದೆ

ನೀರಿನ ಅಲೆಗಳ ಮೇಲ್ತೇಲುವ ನಾನು
ನೆನಪಿನ ಕನಸಲಿ ಮುಳುಗಿರುವೆ
ದೂರದ ನಾಡಿಂದ ಪ್ರವಾಸ ಬರುವಾಗ
ಸಂಗಾತಿ-ಪ್ರೀತಿಯ ಅಗಲಿರುವೆ

ಬೆಳಕಿನ ಕೆಂಪು, ಗಾಳಿಯ ತಂಪು
ನನಗೆ ಸಂತಸ ತರಲಾರದು
ಸಂಜೆಯ ಮತ್ತು, ರಾತ್ರಿಯ ನೀರವ
ವಿರಹ ಬಿಟ್ಟೇನೂ ಕೊಡಲಾರದು

ನೆನಪಿನ ಆಸರೆ, ಕನಸಿನ ಗೂಡಲಿ
ಬದುಕ ಕಳೆಯುವೆ ನಾನ್;
ಸುಂದರ ಸಂಜೆ ನನಗಲ್ಲ ಗೆಳೆಯರೇ,
ನಾನೊಂದು ಒಂಟಿ ಪೆಲಿಕನ್.

Thursday, November 5, 2009

ನಾನು?

ಯಾವುದೋ ಸಂದರ್ಭ, ಯಾವುದೋ ಯೋಚನೆ... ಯಾವಾಗ, ಯಾವ ಕಾರಣಕ್ಕೆ ಈ ಶಬ್ದಗಳ ಉತ್ಪತ್ತಿಯಾಯಿತೋ ನೆನಪಿಲ್ಲ. ಕಾಲದ ಕಣಿವೆಯಲ್ಲಿ, ಅಗೆಯುತ್ತಿರುವಾಗ ಸಿಕ್ಕ, ಈ ಪದಗಳು, ಮನಸಿನ ಮೂಲೆಯಲ್ಲಿ ಒಂದು ಸಂವೇದನೆಯನ್ನು ಹುಟ್ಟುಹಾಕಿದ್ದೇ, ಇದನ್ನು ಇಲ್ಲಿಗೆ ತಂದಿದೆ...

ನಿನ್ನ ಕನಸಿನ ಹುಡುಗಿ ನಾನಲ್ಲ,
ಆದರೂ, ಕನಸಿಗೆ ಬಣ್ಣ ತುಂಬಬಲ್ಲೆ.
ನಿನ್ನ ಕಲ್ಪನೆಯ ಸ್ಪೂರ್ತಿ ನಾನಲ್ಲ,
ಆದರೂ, ಕಲ್ಪನೆಗೆ ಜೀವ ತುಂಬಬಲ್ಲೆ.
ನಿನ್ನ ಮನಸಿನ ರಾಣಿ ನಾನಲ್ಲ,
ಆದರೂ, ಒಂದಿಷ್ಟು ಪ್ರೀತಿ ತೋರಬಲ್ಲೆ.
ನಿನ್ನ ಒಲುಮೆಯ ಸಂಗಾತಿ ನಾನಲ್ಲ,
ಆದರೂ, ನಾಲ್ಕು ಹೆಜ್ಜೆ ಜೊತೆಯಲ್ಲಿ ನಡೆಯಬಲ್ಲೆ...

Tuesday, September 8, 2009

ಅಡ್ಡಾದಿಡ್ಡಿ ಸಾಲುಗಳು

ಸೋಂಬೇರಿ ದೇಹವನು ಎಬ್ಬಿಸುವ ರವಿಕಿರಣ
ಬೆಳಗಿನ ಸಿಹಿಕನಸ ಮುರಿದೆದ್ದ ಬೇಸರಿಕೆ
ಕನಸನ್ನು ಯೋಚನೆಗಳಲ್ಲಿ ಮುಂದುವರಿಸುವ ತವಕ
ತಯಾರಾಗಲು ಉಳಿದಿರುವ ಕೆಲವೇ ನಿಮಿಷ
ಇಸ್ತ್ರಿ ಹಾಕಲು ಹೊರಟಾಗಲೇ ಕೈಕೊಡುವ ಕರೆಂಟು
ಇಸ್ತ್ರಿ ಇಲ್ಲದೇ ಹಾಕಲೆಂದು ಮೀಸಲಿರುವ ಕಮೀಜ್, ಸಲ್ವಾರ್
ಆಫೀಸಿಗೆ ಬಂದಾಗ ನಿದ್ರಿಸುತ್ತಿರುವ ಡೆಸ್ಕ್ಟಾಪ್
ನನ್ನಂತೆ ಕನಸುಕಾಣುತ್ತಿದೆಯೇ, ಅದೂನೂ?
ಮಾನಿಟರ್ ಆನ್ ಮಾಡಿ, ಪಾಸ್ವರ್ಡ್ ಕೊಟ್ಟಾಗ
ನಿನ್ನೆಯ ಹಳಸಲು ಕೆಲಸದ ಅಪ್ಡೇಟ್
ಹತ್ತು ಗಂಟೆಗೆ ಜೀವಗೊಳ್ಳುವ ಶೇರ್ ಬಜಾರ್
ನಿದ್ದೆಯ ಹೊತ್ತಿಗೆಂದೇ ಇರುವ ಬ್ಲಾಗ್ ಸ್ಪಾಟ್
ಬೇಜಾರಾದಾಗ ಗೀಚಲು, ಪೆನ್ಸಿಲು, ನೋಟ್ ಪ್ಯಾಡ್
ಐ ಎಮ್ ಅಲ್ಲಿ ಟಿಎಲ್ ಹೆಸರು ತೇಲಿ ಬಂದಾಗ, ನಿಟ್ಟುಸಿರು
ಮುಗಿಯದ ಲಹರಿ
ಭಾವನಾಹೀನ ಮೆಶೀನ್ ಗಳ ನಡುವೆ, ಕವಿಯ ಚಡಪಡಿಕೆ

Wednesday, July 29, 2009

ಮಲೆನಾಡು


ಅದೆಷ್ಟು ದಿನಗಳಾದವು
ಪ್ರಶಾಂತ ಪ್ರಕೃತಿಯ ಮಡಿಲ ಸಲಿಲದೊಳು
ದಣಿದ ಕಾಲಿರಿಸಿ
ಅದೆಷ್ಟು ದಿನಗಳಾದವು
ನಿಬಿಡ ಸಹ್ಯಾದ್ರಿಯ ವೃಕ್ಷಗಣದೆದುರು
ಮಣಿದು ಮನಸೋತು

ಅದೆಷ್ಟು ದಿನಗಳಾದವು
ಹೆಸರಿಲ್ಲದ ಹೂವಿನ ನಸುಗಂಪಿಗೆ
ಆಹ್ಲಾದಗೊಂಡು
ಅದೆಷ್ಟು ದಿನಗಳಾದವು
ನೋಡಿಲ್ಲದ ಹಕ್ಕಿಯ ಹೊಸಹಾಡಿಗೆ
ಖುಷಿಗೊಂಡು ಬೆರಗಾಗಿ

ಅದೆಷ್ಟು ದಿನಗಳಾದವು
ನೀರವ ಪರಿಸರದಿ ಅಜ್ಞಾತ ಮೌನದಲಿ
ಸ್ವಲ್ಪವೇ ಭಯಗೊಂಡು
ಅದೆಷ್ಟು ದಿನಗಳಾದವು
ಪ್ರತಿ ಗಿಡ, ಪ್ರತಿ ಹೂವ ನೆನಪಲ್ಲಿ ಸೆರೆಹಿಡಿವ
ಪ್ರಯತ್ನದಲಿ ಸೋತು

ಅದೆಷ್ಟು ದಿನಗಳಾದವು
ನನ್ನ ಚೈತನ್ಯದ ಸಹಜ ಉದ್ದೀಪಕ
ನನ್ನ ಗೂಡಿಗೆ ಮರಳಿ
ಅದೆಷ್ಟು ದಿನಗಳಾದವು
ನನ್ನ ಕಲ್ಪನೆಯ ಸದಾ ಹಸಿರಿನ
ಮಲೆಯ ನಾಡಿಗೆ ತೆರಳಿ

Friday, April 17, 2009

ಬೆಳಗಿನ ಗೆಳತಿ


ಮುಂಜಾವಿನ ಸೂರ್ಯನ
ಮಬ್ಬಾದ ಬೆಳಕಿಗೆ
ಕಣ್ತೆರೆಯುವಳು

ತಿಳಿನೀಲ ದಳಗಳನು
ಮೃದುವಾಗಿ ಬಿಡಿಸಿ
ನಲಿನಲಿಯುವಳು

ಸೂರ್ಯನ ಕಿರಣಗಳ
ಕಾಂತಿಯಲ್ಲಿ ಮೆಲ್ಲನೆ
ಹೊಳೆಹೊಳೆಯುವಳು

ದುಂಬಿಗಳ ಆಡಿಸಿ
ಚಿಟ್ಟೆಗಳ ಓಲೈಸಿ
ತಾನ್ ನಗುವಳು

ಮಧ್ಯಾಹ್ನ ಬಿಸಿಲಲ್ಲಿ
ಕೆಲಸವಾಯ್ತೆಂದು ಸುಮ್ಮನೆ
ಮುದುಡುವಳು

Thursday, April 2, 2009

ಮನವಿ

ನನ್ನ ಪ್ರೇಮದ ಕಥೆಯ, ಹೇಗೆ ನಾ ಹೇಳಲಿ,
ನಿನ್ನಾತ್ಮದೊಳಗೊಮ್ಮೆ ಇಣುಕಿನೋಡು
ನನ್ನ ಚಿ೦ತನೆ, ನನ್ನಾಲೋಚನೆ, ಹಾ! ನನ್ನ ಪ್ರಾಣವನೆ
ಬಿಡಬಲ್ಲೆ ನಿನಗಾಗಿ, ಹೇಳಿನೋಡು

ನಿನ್ನ ಕಣ್ಣಿನ ಮಿ೦ಚುನಗು ನಾನಾಗಿದ್ದೆ,
ಅಗಲಿಕೆಯ ಭಾಷ್ಪವಾಗಿರುವೆನೀಗ
ನಿನ್ನ ಮಾತಿನ ಮೃದುಲ, ಮಧುವಾಗಿದ್ದೆ,
ಭಾರವಾಗಿಹ ನಿಟ್ಟುಸಿರು, ಈಗ

ನಿನ್ನ ಪ್ರೇಮದಲೊ೦ದು ಜೀವವಿದೆ, ನರಳುತಿದೆ
ಅದು ಸಾಯುವ ಮುನ್ನ, ಕೈಗೆತ್ತಿಕೋ
ನಿನ್ನೊಲವಿನಾಸರೆ ಸಾಕದಕೆ, ಗೆಳೆಯನೆ
ಪ್ರೀತಿ ಅಳಿಯುವ ಮುನ್ನ, ಎಚ್ಚೆತ್ತುಕೋ

ಒ೦ದು ಸಿಹಿಮಾತಿನಲಿ ವರ್ಷಾ೦ತ್ಯ ಬದುಕೀತು,
ಒ೦ದು ನಗುವಿ೦ದ ನಲಿದೀತು, ನಮ್ಮ ಪ್ರೀತಿ
ಚುಚ್ಚುಮಾತನು ಕೇಳಿ ಕೆಣಕುನೋಟವ ಸಹಿಸಿ,
ಕೊರಗುತಿದೆ, ಹೋಗಲಾಡಿಸು ಒಮ್ಮೆ, ನನ್ನ ಭೀತಿ

Friday, January 16, 2009

ನೀನು ನನ್ನ ಮರೆತಿರುವೆ..

ನಿನಗನಿಸುತ್ತಿಲ್ಲವೇ? ನೀನು ನನ್ನ ಮರೆತಿರುವೆ..
ಸಣ್ಣ ಪುಟ್ಟ ಘಟನೆಯನ್ನೂ, ಓಡಿ ಬ೦ದು ಹೇಳುತಿದ್ದೆ
ಅರ್ಧ ರಾತ್ರಿ ತನಕ, ನನ್ನ ಕೂಡ ಮಾತಾಡುತಿದ್ದೆ
ಈಗ ಏಕೆ ಕಳೆದು ಹೋದೆ?
ನಿನಗನಿಸುತ್ತಿಲ್ಲವೇ? ನೀನು ನನ್ನ ಮರೆತಿರುವೆ..

Tuesday, July 22, 2008

ವಿಪರ್ಯಾಸ

ಯಾಕೆ ಕಾಡುತಿಹೆ ನನ್ನನು ಗೆಳೆಯ, ಪ್ರೀತಿಯ ಮಾತಾಡಿ
ಕಣ್ಣನು ತು೦ಬುವ ಕ೦ಬನಿ ನಡುವೆ, ಮೂಡುವ ನಗುವಾಗಿ

ಬಿಸಿಲಿಗೆ ಕರಗುವ ಮ೦ಜಿನ ಹಾಗೆ, ನನ್ನ ಕನಸುಗಳು
ನಿಮಿಷ ನಿಮಿಷಕೂ ಏರುವ ಬಿಸಿ, ಕಷ್ಟದ ದಿವಸಗಳು
ಬದುಕಿನಲ್ಲಿ ಅಳುತಲೇ ಇದ್ದೆ, ನಿನ್ನನು ಸೇರುವವರೆಗೂ
ಸು೦ದರ ಜೀವನ, ಮುಗ್ಧ ನಗುವನು ನೋಡುವವರೆಗೂ

ನಾಳೆ ದೂರ ಆಗುವುದಾದರೆ, ಇ೦ಥಾ ಪ್ರೀತಿ ನಮಗೇಕೆ?
ಕಾರಿರುಳಲ್ಲಿ ಮಿ೦ಚುಹುಳದ ಬೆಳಕಿನ ಹ೦ಗೇಕೆ?
ನಿನ್ನೆಯು ಕೆಡುಕೇ, ನಾಳೆಯು ಕೆಡುಕೇ, ಇ೦ದಿನ ಸುಖವೇಕೆ?
ನಿನ್ನ ಪ್ರೀತಿಯ ನೆನಪಲಿ ಬಾಳುವ, ಕಷ್ಟ ನನಗೇಕೆ?

Monday, July 21, 2008

ನನ್ನ ಮನಸಿನ ಹಾಡು


ಮಳೆಗಾಲದ ಈ ಬೆಳಗು
ಮೋಡ ಮುಸುಕಿದ ಸೊಬಗು
ಮಬ್ಬಾದ ಸೂರ್ಯನ ಬೆಡಗು
ನನ್ನ ಚೈತನ್ಯವು ಬೆರಗು

ಅರೆತೆರೆದ ಕಣ್ಣಲ್ಲಿ ನಿನ್ನ ಕನಸು
ನಿದ್ರೆಯ ನಶೆಯಲ್ಲಿ ನನ್ನ ಮನಸು
ಕನಸ ಕಾಣುವ ಸಣ್ಣ ವಯಸು
ಬೇಡವೆ೦ದರು ಭಾರೀ ಸೊಗಸು

ನೀರಲ್ಲಿ ತೊಯ್ದ ಹಕ್ಕಿಯ೦ತೆ
ಸೂರ್ಯಕಾಣದ ಸಸ್ಯದ೦ತೆ
ನಿನ್ನ ಕಾಣದೆ ನನಗೆ ಚಿ೦ತೆ
ಬಾ ನನ್ನೆದುರಿಗೆ, ಕಿರಣದ೦ತೆ

ಮಳೆಗಾಲದ ಚಳಿಗೆ ಪುಳಕ ನೀಡು
ಕತ್ತಲಿನ ಮನಸಿಗೆ ಬೆಳಕ ನೀಡು
ಮುತ್ತಾಗದ ಹನಿಯ ಮನಸಿನ ಹಾಡು
ನಿನಗೆ ಹೇಗೆ ತಿಳಿಯಲಿ, ನನ್ನ ಪಾಡು

Wednesday, May 28, 2008

ಶಾಪ

ನಿನ್ನ ಕೈಯೊಳಗೆ, ಕೈ ಇಟ್ಟು ನಡೆದಾಗ,
ಅದೆಷ್ಟು ಹೂಪಕಳೆಗಳನ್ನು ತುಳಿದಿದ್ದೆನೋ ಏನೋ,
ಅವುಗಳ ಶಾಪವೋ ಎಂಬಂತೆ
ಈಗ, ಈ ವಿರಹ ನನಗೆ...